ಬೆಳವಣಿಗೆ
ವಿಶ್ವವಿದ್ಯಾನಿಲಯವು ತನ್ನ ಶೈಕ್ಷಣಿಕ ಚಟುವಟಿಕೆಗಳನ್ನು ಕೃಷಿ ಮತ್ತು ಪಶುವೈದ್ಯಕೀಯ ವಿಷಯಗಳಲ್ಲಿ ಸ್ನಾತಕ ಪದವಿ ಕಾರ್ಯಕ್ರಮಗಳನ್ನು ನೀಡುವುದರ ಮೂಲಕ ಪ್ರಾರಂಭಿಸಿತು. ನಂತರ ಮಂಗಳೂರಿನಲ್ಲಿ ಮೀನುಗಾರಿಕೆ ಕಾಲೇಜು ಸ್ಥಾಪಿಸುವುದರ ಮೂಲಕ ಮೀನುಗಾರಿಕೆ ವಿಜ್ಞಾನದಲ್ಲಿ ಸ್ನಾತಕ ಪದವಿಯನ್ನು ಸಹ ಪ್ರಾರಂಭಿಸಿತು. ತೋಟಗಾರಿಕೆಯ ವಿಷಯದ ಬೋಧನೆಯ ಅವಶ್ಯಕತೆಯಿಂದಾಗಿ ಮೂಡಗೆರೆಯಲ್ಲಿ ತೋಟಗಾರಿಕೆ ಕಾಲೇಜು ಸ್ಥಾಪಿಸಿ ತೋಟಗಾರಿಕೆ ವಿಷಯದಲ್ಲಿ ಸ್ನಾತಕ ಪದವಿಯನ್ನು ಸಹ ಪ್ರಾರಂಭಿಸಲಾಯಿತು. ಹೆಬ್ಬಾಳದಲ್ಲಿ ಹೈನು ವಿಜ್ಞಾನ ಕಾಲೇಜು ಪ್ರಾರಂಭಿಸಿ ಹೈನು ವಿಜ್ಞಾನದಲ್ಲಿ ಸ್ನಾತಕ ಪದವಿ ಕಾರ್ಯಕ್ರಮವನ್ನು ಸೇರಿಸಲಾಯಿತು. ಕೃಷಿ ಮಾರುಕಟ್ಟೆ ಮತ್ತು ಸಹಕಾರ ವಿಭಾಗವನ್ನು ಹೊಸದಾಗಿ ರಚಿಸಲಾಯಿತು ಹಾಗೂ ಕೃಷಿ ಮಾರುಕಟ್ಟೆ ಹಾಗೂ ಸಹಕಾರದಲ್ಲಿ ಸ್ನಾತಕ ಪದವಿ ಕಾರ್ಯಕ್ರಮವನ್ನು ಸಹ ಪ್ರಾರಂಭಿಸಲಾಯಿತು. ದಕ್ಷಿಣ ಕೊಡಗಿನ ಪೊನ್ನಂಪೇಟೆಯಲ್ಲಿನ ಹೊಸ ಅರಣ್ಯ ಕೃಷಿ ಕಾಲೇಜು ಅರಣ್ಯಶಾಸ್ತ್ರದಲ್ಲಿ ಸ್ನಾತಕ ಪದವಿ ಕಾರ್ಯಕ್ರಮವನ್ನು ನೀಡಿದರೆ ಚಿಂತಾಮಣಿಯಲ್ಲಿ ಹೊಸದಾಗಿ ಸ್ಥಾಪಿತವಾದ ರೇಷ್ಮೆ ಕೃಷಿ ಕಾಲೇಜು ರೇಷ್ಮೆ ಕೃಷಿಯಲ್ಲಿ ಸ್ನಾತಕ ಪದವಿಯನ್ನು ನೀಡಲು ಪ್ರಾರಂಭಿಸಿತು. ಚಿಂತಾಮಣಿ ಆವರಣವು 2007ರಿಂದ ಬಿ.ಎಸ್ಸಿ (ಕೃಷಿ) ಪದವಿಯನ್ನು ಸಹ ನೀಡುತ್ತಿದೆ. ಕೃಷಿ ಇಂಜಿನಿಯರಿಂಗ್ ವಿಭಾಗವು ಕೃಷಿ ಇಂಜಿನಿಯರಿಂಗ್ ವಿಷಯದಲ್ಲಿ ಸ್ನಾತಕ ಪದವಿಯನ್ನು ನೀಡುತ್ತಿದೆ. ಇದರಿಂದಾಗಿ ಈಗಾಗಲೇ ಅಸ್ತಿತ್ವದಲ್ಲಿರುವ ಕೃಷಿ ಸಂಶೋಧನಾ ಕೇಂದ್ರಗಳಲ್ಲಿನ ಸೌಲಭ್ಯಗಳನ್ನು ಬಳಸಿಕೊಂಡು ಶಿಕ್ಷಣದ ಗ್ರಾಮೀಣೀಕರಣ ಸಾಧ್ಯವಾಗಿದೆ.
ಪ್ರಸ್ತುತದಲ್ಲಿ ಬೀದರ್ ನಲ್ಲಿ ಕೇಂದ್ರಸ್ಥಾನವನ್ನು ಹೊಂದಿರುವ ಹೊಸದಾಗಿ ಸ್ಥಾಪಿತಗೊಂಡ ಕರ್ನಾಟಕ ಪಶುವೈದ್ಯಕೀಯ, ಜಾನುವಾರು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯವು ಪಶುವೈದ್ಯಕೀಯ ವಿಜ್ಞಾನ, ಹೈನು ವಿಜ್ಞಾನ ಮತ್ತು ಮೀನುಗಾರಿಕೆ ವಿಜ್ಞಾನಗಳಲ್ಲಿ ಸ್ನಾತಕ ಪದವಿ ಕಾರ್ಯಕ್ರಮಗಳನ್ನು ನೀಡುತ್ತಿದೆ.