ನಿರ್ದೇಶಕರ ಸಂದೇಶ
-
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ಕೃಷಿ ಶಿಕ್ಷಣ ಮತ್ತು ಸಂಶೋಧನೆಯ ಒಂದು ಅಗ್ರಣೀಯ ಸಂಸ್ಥೆಯಾಗಿದ್ದು ಇತ್ತೀಚೆಗೆ ಸುವರ್ಣ ಮಹೋತ್ಸವವನ್ನು ಆಚರಿಸಿಕೊಂಡಿದೆ ಹಾಗೂ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಹೆಸರು ಗಳಿಸಿದೆ. ವಿಶ್ವವಿದ್ಯಾನಿಲಯವು ಭಾರತದ ಕರ್ನಾಟಕ ರಾಜ್ಯದ ಪೂರ್ವ ಒಣ ವಲಯ (ವಲಯ 5), ದಕ್ಷಿಣ ಒಣ ವಲಯ (ವಲಯ 6) ಮತ್ತು ಮಧ್ಯ ಒಣ ವಲಯ (ವಲಯ 4) ಹಾಗೂ ದಕ್ಷಿಣ ಸಂಕ್ರಮಣ ವಲಯಗಳ (ವಲಯ 7) 10 ದಕ್ಷಿಣ ಜಿಲ್ಲೆಗಳ ಸಂಶೋಧನಾ ಅವಶ್ಯಕತೆಗಳನ್ನು ಪೂರೈಸುತ್ತಿದೆ. ಅತ್ಯುತ್ತಮ ಪ್ರಯೋಗಾಲಯಗಳು, ಆಡಳಿತ ಕಚೇರಿ ಕಟ್ಟಡಗಳು ಮತ್ತು ಸ್ಥಳ ನಿರ್ದಿಷ್ಟ ಸಂಶೋಧನೆಗಳನ್ನು ಕೈಗೊಳ್ಳಲು ಇತರ ಮೂಲಭೂತ ಸೌಕರ್ಯಗಳನ್ನೊಳಗೊಂಡ ಅತ್ಯಾಧುನಿಕ ಸಂಶೋಧನಾ ಸೌಲಭ್ಯಗಳನ್ನು ವಿಶ್ವವಿದ್ಯಾನಿಲಯವು ಹೊಂದಿದೆ. ಜಿ.ಕೆ.ವಿ.ಕೆ. (ವಲಯ 4 ಮತ್ತು 5) ಹಾಗೂ ಮಂಡ್ಯಗಳಲ್ಲಿನ (ವಲಯ 6 & 7) ಎರಡು ವಲಯ ಸಂಶೋಧನಾ ಕೇಂದ್ರಗಳ ಸುಪರ್ದಿಯಲ್ಲಿ ವಿಶ್ವವಿದ್ಯಾನಿಲಯವು ಒಂಭತ್ತು ಕೃಷಿ ಸಂಶೋಧನೆ ಕೇಂದ್ರಗಳನ್ನು, ಒಂದು ಪ್ರಮುಖ ಸಂಶೋಧನಾ ಕೇಂದ್ರವನ್ನು ಹಾಗೂ ಒಂದು ಸಾವಯವ ಕೃಷಿ ಸಂಶೋಧನಾ ಕೇಂದ್ರವನ್ನು ಹೊಂದಿದೆ. ವಿಶ್ವವಿದ್ಯಾನಿಲಯದಲ್ಲಿರುವ ಪೂರಕ ಆನುವಂಶಿಕ ಸೌಲಭ್ಯ, ಮಾರ್ಕರ್ ಸಹಾಯದ ಆಯ್ಕೆ, ಜೈವಿಕ ತಂತ್ರಜ್ಞಾನ, ಒಣಭೂಮಿ ಬೇಸಾಯದ ಅತ್ಯತ್ಕೃಷ್ಟತಾ ಕೇಂದ್ರ, ತೃಣಧಾನ್ಯಗಳು, ಕೀಟ ವರ್ಗೀಕರಣದ ಉತ್ಕೃಷ್ಟತಾ ಕೇಂದ್ರಗಳು ಇಲ್ಲಿ ಉಲ್ಲೇಖನಾರ್ಹವಾಗಿವೆ.
ಸೂಕ್ತ ಮೂಲಭೂತ ಮತ್ತು ಅನ್ವಯಿಕ ಸಂಶೋಧನೆಗಳನ್ನು ರೈತ ಸಮುದಾಯದ ಜೀವನೋಪಾಯದ ಸುರಕ್ಷತೆಗಾಗಿ ಕೈಗೊಳ್ಳುವ ಈ ವಿಶ್ವವಿದ್ಯಾನಿಲಯವು ದೇಶದಲ್ಲೇ ಅತ್ಯಂತ ಯಶಸ್ವಿ ರಾಜ್ಯ ಕೃಷಿ ವಿಶ್ವವಿದ್ಯಾನಿಲಯವಾಗಿದೆ ಎಂಬುದಾಗಿ ನಿರೂಪಿಸುವುದು ನಿರ್ದೇಶನಾಲಯದ ಗುರಿಯಾಗಿದೆ.
"ಪ್ರದೇಶದ ಪರಿಸರವನ್ನು ಕಾಪಾಡುವುದರ ಜೊತೆಗೆ ಕೃಷಿ ಉತ್ಪಾದಕತೆ ಹಾಗೂ ಆಹಾರ ಸುರಕ್ಷತೆಯನ್ನು ಹೆಚ್ಚಿಸುವಂತಹ ಸಮಕಾಲೀನ ಸಮಸ್ಯೆಗಳ ಕುರಿತಂತೆ ಭಾಗವಹಿಸುವಿಕೆ ವಿಧಾನದಲ್ಲಿ ಕ್ಷೇತ್ರದಲ್ಲಿನ ಮತ್ತು ಕೇಂದ್ರಗಳಲ್ಲಿನ ಸಂಶೋಧನೆಗೆ ಒತ್ತು ನೀಡುವುದು" ನಿರ್ದೇಶನಾಲಯದ ಉದ್ದೇಶವಾಗಿದೆ.
ವಿಶ್ವವಿದ್ಯಾನಿಲಯವು ಮುಂಚೂಣಿ ಕ್ಷೇತ್ರಗಳಾದಂತಹ ಹವಾಮಾನ ಸಹಿಷ್ಣು ಕೃಷಿ, ಜೈವಿಕ ತಂತ್ರಜ್ಞಾನ, ನಿಖರ ಬೇಸಾಯ, ನ್ಯಾನೊ ತಂತ್ರಜ್ಞಾನ, ತಳಿ ಸಂವರ್ಧನಾ ಪೂರ್ವ ಸಿದ್ಧತೆ, ನೀರು ಉತ್ಪಾದಕತೆ, ಯಾಂತ್ರೀಕರಣ, ಕೊಯ್ಲೋತ್ತರ ತಂತ್ರಜ್ಞಾನ ಮತ್ತು ಮೌಲ್ಯವರ್ಧನೆ, ಸ್ಥಳ ನಿರ್ದಿಷ್ಟ ಸಮಗ್ರ ಬೇಸಾಯ ವ್ಯವಸ್ಥೆಯ ಪುನರ್ ಆವಿಷ್ಕಾರ, ಕೃಷಿಯಲ್ಲಿ ಮಾಹಿತಿ ಸಂವಹನ ತಾಂತ್ರಿಕತೆ, ಮಾರುಕಟ್ಟೆ ಬುದ್ಧಿಮತ್ತೆ ಮುಂತಾದವುಗಳ ಸಂಶೋಧನೆಯೆಡೆ ಹೆಚ್ಚು ಕೇಂದ್ರೀಕರಿಸುತ್ತಿದೆ.
ಪ್ರಮುಖ ವಿದ್ಯಮಾನಗಳು, ಚಾಲಕಗಳು, ಸವಾಲುಗಳು ಮತ್ತು ಉಗಮವಾಗುತ್ತಿರುವ ವೈಜ್ಞಾನಿಕ ಅವಕಾಶಗಳ ಕ್ಷೇತ್ರಗಳ ಕುರಿತ ಚಿಂತನೆಗಳಲ್ಲಿ ಗಮನಾರ್ಹ ಸಾಮ್ಯತೆ ಕಂಡುಬಂದಿದ್ದು ಈ ಆಲೋಚನಾ ಲಹರಿಯು ವಿಶ್ವವಿದ್ಯಾನಿಲಯದ ಹಲವಾರು ವಿಚಾರಗಳೊಂದಿಗೆ ಸಮ್ಮಿಳಿತವಾಗುತ್ತದೆ. ರೈತ ಸಮುದಾಯದ ಜೀವನೋಪಾಯದ ಸುರಕ್ಷತೆಯ ಜೊತೆಗೆ ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ ವಿಶ್ವವಿದ್ಯಾನಿಲಯವು ಮೂಲಭೂತ ಮತ್ತು ಕಾರ್ಯತಾಂತ್ರಿಕ ಸಂಶೋಧನಾ ಸಹಯೋಗವನ್ನು ಜಾಗತಿಕವಾಗಿ ಹೊಂದಿದೆ.